ಮಹಾವಸ್ತು -
ಮಹಾಸಾಂಫಿಕ-ಲೋಕೋತ್ತರವಾದಿಗಳ ವಿನಯಪಿಟಕದ ಪಾಠದಲ್ಲಿ ಸೇರಿರುವ ಮಹಾವಸ್ತು ಅವದಾನವೆಂದು ಪರಿಗಣಿತವಾಗಿದೆ. ಈ ಗ್ರ್ರಂಥದ ಪ್ರಮುಖ ವಿಷಯವೆಂದರೆ ಬುದ್ಧನ ಜೀವಿತ. ಹೀನಯಾನ ಸಂಪ್ರದಾಯಕ್ಕೆ ಸೇರಿದ ಗ್ರಂಥವಾದರೂ ಇದರಲ್ಲಿ ಅದ್ಭುತನಿರೂಪಣೆ ಎದ್ದು ಕಾಣುತ್ತದೆ. ಪಾಳಿಪಿಟಕದ ಮಹಾವರ್ಗವನ್ನು ಆರಂಭದಲ್ಲಿ ಅವಲಂಬಿಸಿದರೂ ಮುಂದೆ ಮುಂದೆ ಹೇರಳವಾದ ಜಾತಕ ಕಥೆಗಳೂ ಅವದಾನಗಳೂ ಬರುತ್ತದೆ. ಇವುಗಳಲ್ಲಿ ಹಲವು ಕಥೆಗಳು ಪಾಳಿಗ್ರಂಥಗಳಲ್ಲಿ ಕಾಣಸಿಗುವುದಿಲ್ಲ. ಸ್ಥವಿರವಾದವೇ ಮುಖ್ಯವಾದ ಗುಣವಾದರೂ ಮಹಾಯಾನದ ವಿವರಗಳು ಹಲವಾರು ಇಲ್ಲಿ ಸೇರಿಕೊಂಡಿವೆ. ಇಲ್ಲಿ ಬರುವ ದಶಭೂಮಿಗಳ ಪ್ರಸ್ತಾಪ. ಬೋಧಿಸತ್ತ್ವನ ಪಾರಮಿಗಳು, ಬುದ್ಧಕ್ಷೇತ್ರದ ವರ್ಣನೆ ಬೋಧಿಸತ್ತ್ವದ ಅಲೌಕಿಕ ಜನ್ಮ ಇವೆಲ್ಲ ಹೀನಯಾನಕ್ಕೆ ಹೊಸವಿವರಗಳು. ಎಂದರೆ ಮಹಾಯಾನಪಂಥ ಸ್ಪಷ್ಟವಾಗಿ ರೂಪತಳೆಯುವ ಮುನ್ನವೇ ನಿರ್ಮಿತವಾದ ಗ್ರಂಥ ಇದು. ಆದರೆ ಚೀನೀಭಾಷೆ ಮತ್ತು ಲಿಪಿಗಳ, ಹೂಣರ ಹೋರಾಪಾಠಕರ ಪ್ರಸ್ತಾಪವಿರುವುದರಿಂದ ಮಹಾವಸ್ತುವಿನ ಮೂಲಪಾಠ ಕ್ರಿಸ್ತಾಬ್ದ ನಾಲ್ಕನೆಯ ಶತಮಾನದ ವೇಳೆಗೆ ಮುಗಿಯಿತು ಎಂದು ವಿದ್ವಾಂಸರ ಅಭಿಪ್ರಾಯ.

	ಮಹಾವಸ್ತುವಿನ ಭಾಷೆ ಸಂಸ್ಕøತವಾದರೂ ಅಪಭ್ರಷ್ಟ; ಹಿಂದಿನ ಹೀನಯಾನ ಗ್ರಂಥಗಳಂತೆ ಪ್ರಾಕೃತವೂ ಅಲ್ಲ. ಮಹಾಯಾನಗ್ರಂಥಗಳಂತೆ ಸ್ವಚ್ಛ ಸಂಸ್ಕøತವೂ ಅಲ್ಲ. ಮುಂದಿನ ಮಹಾಯಾನಗ್ರಂಥಗಳಂತೆ ಸ್ವಚ್ಛ ಸಂಸ್ಕøತವೂ ಅಲ್ಲ. ಪಾಕೃತಮಿಶ್ರವಾದ ವ್ಯಾಕರಣದ ದೃಷ್ಟಿಯಲ್ಲಿ ಅಬದ್ಧವಾದ ಸಂಸ್ಕøತ. ಇದು ಮಹಾವಸ್ತುವಿನ ಪ್ರಾಚೀನತೆಯನ್ನು ಸೂಚಿಸುತ್ತದೆ. ಈ ಗ್ರಂಥದ ಶೈಲಿಯಲ್ಲಾಗಲೀ ವಸ್ತುವಿನ್ಯಾಸದಲ್ಲಾಗಲೀ ಏಕತಾನವಿಲ್ಲ. ಬುದ್ಧನ ಜೀವತಪ್ರಸಂಗಗಳನ್ನು ನಿರೂಪಿಸುವುದು ಮುಖ್ಯ ವಿಚಾರವಾದರೂ ನೂರಾರು ಅಪ್ರಸ್ತುತ ಪ್ರಸ್ತಾಪಗಳ ಗೊಂದಲದಲ್ಲಿ ಈ ಎಳೆಗಳನ್ನು ಕಾಣುವುದೇ ಕಷ್ಟವಾಗುತ್ತದೆ. ಕ್ರಮಬದ್ಧವಾದ ನಿರೂಪಣೆಯಿಲ್ಲ. ಒಂದೊಂದು ಪ್ರಸಂಗವೇ ನಾಲ್ಕಾರು ಬಾರಿ ಬರುವುದೂ ಉಂಟು, ಶೈಲಿಯಲ್ಲಿ ಗಾಥೆಗಳೂ ಗದ್ಯವೂ ಸೇರಿವೆ.

	ಪ್ರಾಚೀನ ಸಂಪ್ರದಾಯವನ್ನು ಅರಿಯಲು ಮಹಾವಸ್ತು ನೆರವಾಗುತ್ತದೆ. ಪಾಳೀ ವಾಙ್ಮಯದಲ್ಲಿರುವ ವಿವರಗಳೇ ಇಲ್ಲೂ ಹಲವೆಡೆ ಬರುತ್ತದೆ. ನಿದರ್ಶನಕ್ಕೆ ಇಲ್ಲಿ ಬರುವ ಮಹಾಭಿನಿಷ್ಕ್ರಮಣದ ವರ್ಣನೆ ಮಜ್ಝಿಮ ನಿಕಾಯದ ವರ್ಣನೆಯಂತೆಯೇ ಪುರಾತನವಾದುದು. ಹಾಗೆಯೇ ಧರ್ಮಾಚಕ್ರ ಪ್ರವರ್ತನ ಸೂತ್ರ, ಮಹಾಗೋವಿಂದಸೂತ್ರ, ದೀರ್ಘನಖಸೂತ್ರ, ಮಾರಸಂಯುಕ್ತ, ಕ್ಷುದ್ರಕಪಾಠ, ಪ್ರವ್ರಜ್ಯಾಸೂತ್ರ ಪ್ರಧಾನ, ಖಡ್ಗವಿಷಾಣಸೂತ್ರ ಮುಂತಾದವು ಪ್ರಾಚೀನ ಪಾಠವನ್ನೇ ಅವಲಂಬಿಸಿವೆ. ಪಾಳೀ ಬೌದ್ಧಧರ್ಮ ಕಾಲಕ್ರಮದಲ್ಲಿ ಸಂಸ್ಕøತ ಬೌದ್ಧ ಧರ್ಮಕ್ಕೆ ಎಂದರೆ, ಮಹಾಯಾನ ಪಂಥಕ್ಕೆ, ಎಡೆಮಾಡಿಕೊಡುವ ಪರ್ವಕಾಲದಲ್ಲಿ ನಿರ್ಮಿತವಾದ ಮಹಾವಸ್ತು ಬೌದ್ಧಧರ್ಮದ ಕಾಲಕ್ರಮದಲ್ಲಿ ಸಂಸ್ಕøತ ಬೌದ್ಧ ಧರ್ಮಕ್ಕೇ ಎಂದರೆ, ಮಹಾಯಾನ ಪಂಥಕ್ಕೆ, ಎಡಮಾಡಿಕೊಡುವ ಪರ್ವಕಾಲದಲ್ಲಿ ನಿರ್ಮಿತವಾದ ಮಹಾವಸ್ತು ಬೌದ್ಧಧರ್ಮದ ಇತಿಹಾಸವನ್ನು ಸ್ಪಷ್ಟಗೊಳಿಸಲು ಸಹಕಾರಿಯಾಗಿದೆ. 		
						
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ